ಸರ್ಕಾರ ಶಿಕ್ಷಣವನ್ನು ಹಣ ತೊಡಗಿಸಿ ಲಾಭ ಮಾಡಿಕೊಳ್ಳುವ ಉದ್ಯಮವೆಂದೇ ಭಾವಿಸಿರುವುದು ಸ್ಪಷ್ಟವಾಗಿದೆ

ಮಕ್ಕಳ ಹಾಜರಾತಿ ಕೊರತೆಯ ನೆಪ ಒಡ್ಡಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಲು ಕ್ರಮ ಕೈಗೊಂಡಿರುವ ರಾಜ್ಯದ ಬಿಜೆಪಿ ಸರ್ಕಾರ, ಅದಕ್ಕಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಇದು ರಾಜ್ಯ ಸರ್ಕಾರವೇ ಅಂಗೀಕರಿಸಿದ ಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆ.

ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಕೇಂದ್ರ ಸರ್ಕಾರ ನೀಡಿ ಅದಕ್ಕಾಗಿ ವಿಶೇಷ ಸಂಪನ್ಮೂಲವನ್ನು ನಿಗದಿಪಡಿಸಿದ್ದರೆ, ಅದನ್ನು ಅನುಷ್ಠಾನಗೊಳಿಸುವುದಕ್ಕೆ ರಾಜಕೀಯ ಕಾರಣಕ್ಕಾಗಿ ನಿರಾಸಕ್ತಿ ತೋರಿಸುತ್ತಿರುವ ರಾಜ್ಯ ಸರ್ಕಾರದ ನಡವಳಿಕೆ ರಾಜ್ಯದ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯ.

ಶಿಕ್ಷಣ ನೀಡುವ ಸಾಂವಿಧಾನಿಕ ಕರ್ತವ್ಯವನ್ನು ಮರೆತಿರುವ ಸರ್ಕಾರ ಅದನ್ನು ವ್ಯಾವಹಾರಿಕ ಲಾಭ ತಂದುಕೊಡುವ ಉದ್ಯಮವೆಂದು ಭಾವಿಸಿರುವುದು ಈ ಕ್ರಮದಿಂದ ಸ್ಪಷ್ಟ. ಉದ್ಯಮ ಆರಂಭಿಸುವವರಿಗೆ ನೀಡುವ ಸೂಚನೆಯನ್ನು ನೆನಪಿಸುವಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವ ಸಂಬಂಧದಲ್ಲಿ ಸುತ್ತೋಲೆ ಹೊರಡಿಸಲಾಗಿದೆ.

ಇದನ್ನು ಗಮನಿಸಿದರೆ ಸರ್ಕಾರ ಶಿಕ್ಷಣವನ್ನು ಹಣ ತೊಡಗಿಸಿ ಲಾಭ ಮಾಡಿಕೊಳ್ಳುವ ಉದ್ಯಮವೆಂದೇ ಭಾವಿಸಿರುವುದು ಸ್ಪಷ್ಟವಾಗಿದೆ. ಜನತೆ ನೀಡಿರುವ ಅಧಿಕಾರ ಸ್ವಂತಕ್ಕೆ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಳ್ಳುವುದಕ್ಕೆ ನೀಡಿರುವ ಪರವಾನಗಿ ಎಂದು ಅಧಿಕಾರಕ್ಕೆ ಬಂದ ಮೂರೂವರೆ ವರ್ಷಗಳಲ್ಲಿ ಬೆಳಕಿಗೆ ಬಂದ ಹತ್ತಾರು ಹಗರಣಗಳ ಮೂಲಕ ತೋರಿಸಿಕೊಂಡಿರುವ ಬಿಜೆಪಿ ಸರ್ಕಾರ, ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನೂ ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ ನಡೆಸಿ ರಾಜ್ಯದಲ್ಲಿ ಮುಂದಿನ ಪೀಳಿಗೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.

ಬಾಲ್ಯದ ಹಂತದಲ್ಲಿ ವಿಷಯಗ್ರಹಿಕೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಹೆಚ್ಚು ಪರಿಣಾಮಕಾರಿ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು ಮತ್ತು ಭಾಷಾತಜ್ಞರು ಕಂಡುಕೊಂಡ ಸತ್ಯ. ಪರಿಸರಕ್ಕಿಂತ ಭಿನ್ನವಾದ ಭಾಷೆಯಲ್ಲಿ ಕಲಿಯುವುದರಿಂದ ವಿಷಯದ ಗ್ರಹಿಕೆ ಭಾಷೆಯ ತೊಡಕಿನಿಂದ ಕ್ಲಿಷ್ಟವಾಗಿ ಕಲಿಕೆ ನಿಜಕ್ಕೂ ಹೊರೆಯಾಗುತ್ತದೆ ಎಂದೇ ತಜ್ಞರು ಪ್ರತಿಪಾದಿಸಿದ್ದಾರೆ.

ಆದರೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದರಿಂದ ಉದ್ಯೋಗ ಮತ್ತು ಭವಿಷ್ಯ ಎಂಬ ತಪ್ಪು ಭಾವನೆ ಪೋಷಕವರ್ಗದಲ್ಲಿ ಮನೆ ಮಾಡಿರುವುದರಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಇದೆ.

ಈ ತಪ್ಪುಗ್ರಹಿಕೆಯನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಸರ್ಕಾರದಿಂದ ಆಗುತ್ತಿಲ್ಲ. ಇಂಗ್ಲಿಷನ್ನು ಸಂವಹನ ಭಾಷೆಯಾಗಿ ಕಲಿಯುವುದಕ್ಕೂ, ಅದರ ಮೂಲಕವೇ ಅವಶ್ಯಕ ಜ್ಞಾನ ಶಿಸ್ತುಗಳನ್ನು ಕಲಿಯುವುದಕ್ಕೂ ಇರುವ ವ್ಯತ್ಯಾಸವನ್ನು ಪೋಷಕವರ್ಗಕ್ಕೆ ಮನವರಿಕೆ ಮಾಡಿದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳ ಕುರಿತ ಮೋಹ ಕಡಿಮೆಯಾಗಬಹುದು.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ವಿಷಯ ಗ್ರಹಿಕೆಯ ಭದ್ರ ಬುನಾದಿಯನ್ನು ನಿರ್ಮಿಸುತ್ತದೆ; ಅದರ ಮೇಲೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವುದು ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣದತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಸಂವಹನಕ್ಕೆ ಇಂಗ್ಲಿಷನ್ನು ಭಾಷೆಯಾಗಿ ಪ್ರಾಥಮಿಕ ಹಂತದಲ್ಲಿಯೇ ಸಮರ್ಪಕವಾಗಿ ಕಲಿಸುವ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ಮುಂದಾಗಬೇಕು.

ಆಗ ಕನ್ನಡಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಬರಲಾರದು. ಗುಣಮಟ್ಟದ ಶಿಕ್ಷಣ ನೀಡಲಾಗದ ವೈಫಲ್ಯವನ್ನು ಮುಚ್ಚಿಕೊಳ್ಳಲು ಶಾಲೆಗಳನ್ನೇ ಮುಚ್ಚುವ ಹಾಗೂ ಖಾಸಗಿಯವರು ಹಣ ಮಾಡಿಕೊಳ್ಳುವುದಕ್ಕೆ ಶಿಕ್ಷಣ ಕ್ಷೇತ್ರವನ್ನು ಮುಡಿಪಾಗಿಡುವ ಸರ್ಕಾರದ ಈ ಧೋರಣೆ ಖಂಡನಾರ್ಹ.
Share this article :
 
 
Copyright © 2011. VigZing - All Rights Reserved
Proudly powered by VigZing